ನಮ್ಮ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಹೃದಯ ಶಸ್ತ್ರಚಿಕಿತ್ಸೆಯಂತೆ. ಈಗ ನನ್ನ ಕಾಡ್ತಾ ಇರೋ ಪ್ರಶ್ನೆ ಏನಪ್ಪಾ ಅಂದ್ರೆ, ಈಯಪ್ಪಂಗ ಹೃದಯ ಬೇನೆ ಯಾಕ್ ಬಂತು? ಹೇಗ್ ಬಂತು? ಯಡ್ಯೂರಪ್ಪನ್ನ ಅಷ್ಟೊಂದು ಗೋಳು ಹೊಯ್ಸಿಕೊಂಡ ಈತನಿಗೆ ಹೃದಯಾನೆ ಇಲ್ಲ ಅಂತ ಭಾಜಪರು ಕೂಗಾಡಿದ್ದು ಇನ್ನೂ ನನ್ ಕಿವಿಯಲ್ಲಿ ಗುಂಯ್ ಗುಟ್ತಾಯಿದೆ. ಅದ್ರ್ ಬೆನ್ನಾಗೆ ಕುಮಾರಣ್ಣ ಆಲ್ಟ್ ನೋವು ಅಂದ್ರೆ ಯಂಗೆ ಸಿವಾ? ನಾವ್ ಯಾರನ್ನಾ ಅಂತ ನಂಬದು?
ಮುಖ್ಯಮಂತ್ರಿ ಪಟ್ಟ ತಪ್ಪಿಹೋಯ್ತಲ್ಲಾ ಅಂತ ಚಿಂತೆ ಮಾಡಿ ಮಾಡಿ ಈ ರೀತಿ ಆಗಿದೆ, ಇದಕ್ಕೆ ಭಾಜಪರೇ ಕಾರಣ ಅಂತ ಜಾತಿಗೆಟ್ಟವರು ಅಲ್ಲಲ್ಲ, ಜಾತ್ಯಾತೀತರು ಆಕ್ಷೇಪ ವ್ಯಕ್ತಪಡಿಸಿದ್ದಾರಂತೆ. ಇಡಿ ರಾಜ್ಯವೇ ತನ್ನದು ಅನ್ನೋ ಏಕತಾ ಮನೋಭಾವ ನಮ್ಮ ಕುಮಾರಣ್ಣಂದು, ಆದ್ರಿಂದ ಅವರಿಗೆ ಆಲ್ಟ್ ಇದೆ ಅನ್ನೋದು ಜಾ.ರವರ ವಾದ. ನಿಜ ಅಲ್ವೆ ಮತ್ತೆ? ಇಡಿ ರಾಜ್ಯದ ಭೂಮಿಯನ್ನೆಲ್ಲಾ ನುಂಗಿದ ಫ್ಯಾಮಿಲಿ ಅಲ್ಲವೆ ಅವರದ್ದು? ಅಂದ ಮೇಲೆ ಇಡಿ ರಾಜ್ಯವೇ ನಮ್ಮದು ಅನ್ನೋ ಭಾವನೆ ಹೊಂದಿರೋದು ತಪ್ಪಲ್ಲ ಬಿಡಿ. ಎಲ್ಲಾ ಗಣಿಗಳ [ಸ-ಗಣಿ ಸಮೇತ] (ಅ)ವ್ಯವಹಾರವನ್ನ ನಿಭಾಯಿಸಿಕೊಂಡು ಬರುವಂಥ ಜವಾಬ್ದಾರಿಯುತ ಮನುಷ್ಯ ನಮ್ಮ ಕುಮಾರಣ್ಣ. ಎಂಥಾ ಒಳ್ಳೆ ಮನಸ್ಸು, ಜನಾರ್ಧನ ರೆಡ್ಡಿಗೆ ಯಾಕೆ ಸುಮ್ನೆ ಈ ವ್ಯವಹಾರದ ತಲೆ ನೋವು? ಅಷ್ಟೆ ಯಾಕ್ ಸ್ವಾಮಿ, ಎಲ್ಲಾ ಜನರೂ ತನ್ನವರೆಂದೇ ಭಾವಿಸಿರೋರು ನಮ್ಮ ಕುಮಾರಣ್ಣ. ಅದಕ್ಕೆ ಅಲ್ಲವೆ ಕಂಡ ಕಂಡ ಊರಿಗೆಲ್ಲಾ ಹೋಗಿ ಗ್ರಾಮೀಣ ವಾಸ್ತವ್ಯ ಮಾಡಿದ್ದು? ಆ ಜನಗಳ ಅದೃಷ್ಟ ಎಷ್ಟ್ ಒಳ್ಳೆದು ಅಂತೀರಿ? ನಾಡಿನ ಮುಖ್ಯಮಂತ್ರಿಗಳು ಸ್ವತಃ ತಮ್ಮ ಮನೆಗೆ ಬಂದು, ಸಾಲ ಮಾಡಿ ತಂದು ಮಾಡಿದ ನಾಟಿ ಕೋಳಿ ಸಾರು - ಮುದ್ದೆಯನ್ನ ಗಡದ್ದಾಗಿ ಉಂಡು, ಗೊರಕೆ ಹೊಡೆಯುವಂತೆ ನಿದ್ದೆ ಮಾಡಿದರು ಅಂದ್ಮೇಲೆ ನಮ್ಮ ಗ್ರಾಮೀಣರದ್ದು ಭೋ ಒಳ್ಳೆ ಪುಣ್ಯ ಸ್ವಾಮಿ. ಎಂಥಾ ಪರಸ್ಥಳದಲ್ಲೂ ಉಂಡು ಮಲಗುವಂಥ ವಿಶಾಲ ಮನಸ್ಸು ನಮ್ಮ ಕುಮಾರಣ್ಣಂದು, ಆದ್ರಿಂದ ಅವ್ರುಗೆ ರುದಯ ಅದೆ ಅನ್ನೋದು ಅವರ ಹಿಂಬಾಲಕರ ವಾದ. ತಾನೇನೊ ತಿಂದು ಮಲಗಿಯಾಯ್ತು. ಆದ್ರೆ ಆ ಜನಗಳು ಮಾಡಿದ ಸಾಲ ತೀರಿಸೋರು ಯಾರು? ತಾನು ಮಲಗಿದಾಗ ಆ ಜನಗಳು ತಾವು ಮಲಗದೆ ತನ್ನ ಕಾವಲು ಕಾಯ್ದರಲ್ಲ, ಅವರ ಬಗ್ಗೆ ನಾನೇನು ಮಾಡ್ಲಿಲ್ಲವಲ್ಲ ಅನ್ನೊ ಪಶ್ತಾತ್ತಾಪವೆ ಇಲ್ಲ ಈ sonಸ್ವಾಮಿಗೆ. ಆದ್ರಿಂದ ಇವರಿಗೆ ಹೃದಯ ಇಲ್ಲ, ಇನ್ನು ಹೃದಯದ ಶಸ್ತ್ರಚಿಕಿತ್ಸೆ ಯಾಕೆ? ಎಲ್ಲಾ ಬರಿ ಗಿಮಿಕ್ಕು ಅಂತ ಇತ್ತ ಭಾಜಪರ ಕುಹಕ.
ನೀನೇನಂತೀಯ ಗುರು?


No comments:
Post a Comment