ನಾನ್ ಯಾರಪ್ಪಾ ಅಂದ್ರೆ..

"ಹೆಸರಿನಲೇನಿದೆ, ಮಲ್ಲೆಯ ಹೂವನು ಕಳ್ಳಿಯ ಹೂವೆನೆ ಕಂಪೇನು ಕಡಿಮೆಯಾಗುವುದೇ?" ಅಂತ ಪುಣ್ಯಾತ್ಮರು ಹೇಳಿರ್ ಬೇಕಾದ್ರೂ ಹೆಸರ್ ಕೇಳೋದ್ ಸರಿನಾ? ನಾನೊಬ್ಬ ಕನ್ನಡಿಗ. ಆದ್ರೆ ಇರೋದು ಕೊಂಗ ನಾಡ್ನಲ್ಲಿ.

Thursday 20 December, 2007

ಡಿಸೆಂಬರ್ ಮಾಸ...

ಡಿಸೆಂಬರ್ ಅಂದ್ರೆ ಕೆಲವರಿಗೆ ಕ್ರಿಸ್ಮಸ್, ಕೆಲವರಿಗೆ ಶಿಮ್ಲಾ-ಮನಾಲಿ ಪ್ರವಾಸ, ಐಐಟಿ ಹುಡುಗರಿಗೆ ನೌಕರಿ/ಯುನಿವೆರ್ಸಿಟಿಗಳ ಚಿಂತೆ. ಮತ್ತೆ ಕೆಲವರು ಚಳಿ ಚಳಿ ತಾಳೆನು ಈ ಚಳಿಯಾ, ಆಹಾ! ಅಂತ ತಮ್ಮ ಪಾಡಿಗೆ ತಾವೆ ಹಾಡಿಕೊಂಡಿರ್ತಾರೆ. ಆದ್ರೆ ನನಗ್ ಮಾತ್ರ ಬೇರೇನೇ ಚಿಂತೆ. ಕೈಯಲ್ಲಿರೋ ಅಷ್ಟೊಂದು ಕೆಲಸದ ನಡುವೆ ಸಹಾ ಸಂಗೀತ ಸಭೆಗಳಿಗೆ ಹೋಗೊ ಚಿಂತೆ. ಡಿಸೆಂಬರ್ ಅಂದ್ರೆ ಸಾಕು, ಈ ಕೊಂಗ ನಾಡು ನಂಗೆ ಸಂಪೂರ್ಣ ಬೇರೆ ಥರಾನೇ ಕಾಣತ್ತೆ . ಇಲ್ಲದೆ ಹೋದಲ್ಲಿ ಇಲ್ಲಿ ಇರೋ ನಾವು ಕನ್ನಡ ಕುಲ ಪುತ್ರರು ಗಾಂಧಿಯ [ಈ ಹೆಣ್ಣು 'ಗಾಂಧಿ' ಅಲ್ಲಾ ಸ್ವಾಮಿ, ಆ ತಾತ ಗಾಂಧಿ!]೩ ಕೋತಿಗಳಂತೆ ಇರಬೇಕಾಗುತ್ತೆ - ಊರು ತುಂಬಾ ನಾರು, ಎಲ್ಲೆಲ್ಲೂ ಕರ್ಕಶ ಕಿರುಚಾಟ [ಅವರುಗಳು ಮಾತಾಡೋದೇ ಹಾಗೆ!], ಊರಿಗೆ ಊರೇ ಕೊಳೆಗೇರಿ! ಆದ್ರೆ ಈ ಮಾಸದಲ್ಲಿ ಮಾತ್ರ ಇದು ರಸಿಕರಿಗೆ ಸ್ವರ್ಗ.
ನಾನು ಕಳೆದ ಡಿಸೆಂಬರಿನಲ್ಲೂ ಸಂಗೀತ ಕಛೇರಿಗಳಿಗೆ ಹೋಗಿದ್ದೆ. ಆದ್ರೆ ಈ ಬಾರಿ ತುಂಬ ಇಷ್ಟ ಆಗ್ತಿದೆ. ಬಹುಶಃ ಡಾ|ಸುಕನ್ಯಾ ಪ್ರಭಾಕರ್ ಅವರ ಹಾಡುಗಾರಿಕೆಯಿಂದ, ಮೈಸೂರು ಸಹೋದರರ ಪಿಟೀಲು ವಾದನದಿಂದ, ಹಾಗು ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ಕನ್ನಡಿಗರು ಸಂಗೀತ ಮಂಚದ ಮೇಲೆ ಕಾಣಿಸಿಕೊಂಡಿದ್ದರಿಂದ..ಹಾಗೆ ಹೆಚ್ಚಿನವರು ಮೈಸೂರಿನವರು ಅನ್ನೋದು ತಿಳಿದದ್ದರಿಂದ :)
ಖುಶಿ ಆಗ್ತಿದೆ. ಹಾಗೇನೇ ಸಿಟ್ಟೂ ಬರ್ತಿದೆ. ಸಂಗೀತ ವಿದೂಶಿಯದ ಡಾ|ಸುಕನ್ಯಾ ಪ್ರಭಾಕರ್ ಅವರಿಗೆ ಕೇವಲ ಒಂದೇ ಒಂದು ಅವಕಾಶ- ಇಡೀ ಮಾಸದಲ್ಲಿ! ಕತ್ತೆಗಳಂತೆ ಕಿರುಚುವವರಿಗೆ ಐದಾರು ಕಛೇರಿಗಳಾದರೂ ಮಾಡುವ ಅವಕಾಶ! ಸುಕನ್ಯಾ ಅವರ ಮಾತು ಕೇಳಿ ಬೇಸರ ಆಯ್ತು; ಅವರ ಹಿಂದಿನ ಕಛೇರಿ ೧೯೮೭ರಲ್ಲಿ ಇದ್ದದ್ದಂತೆ, ಅದಾದ ಮೇಲೆ ಈಗಲೇ ಅವಕಾಶ ಸಿಕ್ಕಿದ್ದು ಮ್ಯುಸಿಕ್ ಅಕಾಡೆಮಿಯಲ್ಲಿ ಕಛೇರಿ ಕೊಡೋಕೆ!ಮಧ್ಯದಲ್ಲಿ ಐಐಟಿಯಲ್ಲಿ ಜರುಗುವ ಪುರಂದರದಾಸರ ಆರಾಧನೆಗೆ ಒಮ್ಮೆ ಬಂದದ್ದಂತೆ. ಛೇ! ಇಲ್ಲಿನ ಮ್ಯುಸಿಕ್ ಅಕಾಡೆಮಿಯಲ್ಲಿ ಹಾಡುವುದು ಹೆಮ್ಮೆಯ ವಿಷಯವೇನೋ ಸರಿ, ಆದ್ರೆ ಈ ಥರ ಒಬ್ಬ ವಿದೂಷಿಯನ್ನ ನಡೆಸಿಕೊಳ್ಳೋದು ಎಷ್ಟು ಸರಿ? ನಾವು ಕನ್ನಡಿಗರೂ ಅಷ್ಟೆ, ಬೆಂಗಳೂರು ಹಬ್ಬ ಅಂತ ಏನೋ ಮಾಡಿ ಸೋನು ನಿಗಮ್ ನಿಂದ ಹಿಂದಿ ಹಾಡಿಸ್ತೀವಿ. ಶಾಸ್ತ್ರೀಯ ಸಂಗೀತದ ಹೆಸರಿನಲ್ಲಿ ಕನ್ನಡಿಗರಲ್ಲದವರನ್ನೇ ಕರೆಸ್ತೀವಿ. ಒಂದು ಪಕ್ಷ ಕನ್ನಡಿಗರಿಗೆ ಅವಕಾಶ ಕೊಟ್ಟರೂ, ಕಡಿಮೆ ಸಂಭಾವನೆ ಕೊಡ್ತೀವಿ. ಏನಾಗಿದೆ ನಮಗೆ, ಅಥವ ನಂದಿನಿ ಆಳ್ವಾ ಅಂಥವರಿಗೆ ?
ಇದು ಕಲಾವಿದರ ಸ್ಥಿತಿಯಾದರೆ ನಮ್ಮ ಪುಣ್ಯಾತ್ಮ ದಾಸವರೇಣ್ಯರು, ಕರ್ನಾಟಕದ ವಾಗ್ಗೇಯಕಾರರನ್ನೂ ಕೇಳೋರು ಯಾರೂ ಇಲ್ಲ. ಸುಕನ್ಯ ಅವರಿಂದ ವಾದಿರಾಜರ ಹಾಗು ಜಯಚಾಮರಾಜ ಒಡೆಯರ್ ಅವರುಗಳ ರಚನೆ ಕೇಳಿ ಎಂಥ ಪರಮಾನಂದ ಆಯ್ತು. ಇಲ್ಲಿನ ಕಲಾವಿದರು ಯಾರೂ ಕನ್ನಡ ರಚನೆಗಳನ್ನ ಹಾಡೋಲ್ಲ. ’ಕೃಷ್ಣಾ ನೀ ಬೇಗನೆ ಬಾರೊ’ ಹಾಡಿ ಹಾಡಿ ಸಾಕಾಗಿದೆ ಇವರುಗಳಿಗೆ.
ನಾವೂ ಯಾಕೆ ನಮ್ಮದೆ ಸಂಗೀತ ಉತ್ಸವಗಳನ್ನ ಮಾಡಬಾರ್ದು? ಅಥವ ಇರೋ ಉತ್ಸವಗಳನ್ನೆ [ರುದ್ರಪಟ್ಟಣದ ಉತ್ಸವ, ದಾಸರ ಆರಾಧನೆ, ಇತ್ಯಾದಿ] ಇನ್ನಷ್ಟು ಉತ್ತಮಗೊಳಿಸಿ, ಪ್ರಚಾರ ಮಾಡಬಾರದು?
ನಾವೆಲ್ಲಾ regionally chauvinistic ಆಗಬೇಕು ಅಂತ ಅಲ್ಲ. ಆದ್ರೆ ಈ ಥರ ಅವಮಾನಗನ್ನೆಲ್ಲಾ ಸಹಿಸಿಕೊಳ್ಳೋದು ಯಾಕಪ್ಪ?

No comments:

“ನನ್ನಂತಹವರು ಕನ್ನಡಕ್ಕೆ ಅನೇಕರಿದ್ದಾರೆ. ನನಗಿರುವುದು ಒಂದೇ ಕನ್ನಡ.” ಅನಕೃ ಅವರ ಈ ಮಾತು ನಮ್ಮೆಲ್ಲರಿಗೂ ಅನ್ವಯ; ಈ ಬ್ಲಾಗಿಗೂ!